Monday, June 13, 2011

ಇಂಗ್ಲಿಷ್ ಟೀಚರ್


ನಾನು ಓದಿದ್ದು ಒಂದು ಸಾಧಾರಣವಾದ ಕನ್ನಡ ಮಾಧ್ಯಮ ಶಾಲೆಯಲ್ಲಿ. ಎಂಟನೆಯ ತರಗತಿಯಲ್ಲಿ ಕಾಲಿಟ್ಟೆ. ಒಂದು ತಮಾಷೆ ಕಾದಿತ್ತು. ಆ ವರ್ಷವೇ ನಮ್ಮ ಶಾಲೆಯಿಂದ ಹತ್ತನೆಯ ತರಗತಿಯಲ್ಲಿ ಪಾಸಾಗಿದ್ದ ಹುಡುಗನೊಬ್ಬ ನಮ್ಮ ಪಾಲಿಗೆ ಇಂಗ್ಲಿಷ್ ಟೀಚರ್ ಆಗಿ ಬಂದಿದ್ದ. ಅದು ಹೇಗೆ ಸಾಧ್ಯ ಅಂತ ಮಾತ್ರ ಕೇಳಬೇಡಿ. ಹೀಗೂ ಉಂಟು! ಅದೂ ಜಿಲ್ಲಾ ಪ್ರದೇಶಗಳಲ್ಲಿ! ನಮಗೆ ಏನೂ ಅರ್ಥವೇ ಆಗಲಿಲ್ಲ. ತರಗತಿಯಲ್ಲಿ ಗುಸು ಗುಸು, ಮುಸಿ ಮುಸಿ ನಗು. ಮೊದಲ ದಿನ ಪದ್ಯ ಹೇಳಿಕೊಡಲು ಶುರು ಮಾಡಿದ.

ಅವನ ದುರದೃಷ್ಟ, ನಮ್ಮ ಬ್ಯಾಚ್ ನಿಂದ ಸಿಲೆಬಸ್ ಬದಲಾಗಿತ್ತು, ಅವನು ಓದಿದ ಪಾಠಗಳು ಅವನ ನೆರವಿಗೆ ಬರುವಂತಿರಲಿಲ್ಲ.
ಯಾವುದೋ "ಹಳೆಗನ್ನಡ" ದಂತೆ "ಹಳೆ ಇಂಗ್ಲಿಷ್" ನಲ್ಲಿ ಬರೆದ ಓಬಿರಾಯನ ಕಾಲದ ಪದ್ಯ ಅದು. ತಲೆ ಬುಡ ಅರ್ಥ ಆಗುತ್ತಿಲ್ಲ. ಅವನಿಗೂ ಅರ್ಥವಾಗಿಲ್ಲ. ಪಾಪ, ಅವನಿಗೆ ಮುಜುಗರ ಆಗಬಾರದೆಂದು ನಾವು, ಅರ್ಥ ಆದವರಂತೆ ತಲೆ ಹಾಕುತ್ತ ಇದ್ದೆವು. ಹೀಗೇ ಸಮಯ ಸಾಗುತ್ತಿರುವಾಗ, ಪದ್ಯದಲ್ಲಿ ಏನೋ ಒಂದು ಸಾಲು ಕಂಡಿತು "'T is well ..." ಅಂತ. ಅದಕ್ಕೆ ನಮ್ಮ ಹುಡುಗ, ಕ್ಷಮಿಸಿ ನಮ್ಮ ಗುರುಗಳು ವ್ಯಾಖಾನ ಮಾಡಿದ್ದು ಹೀಗೆ," 'T is well ಅಂದರೆ ಚಹಾ ಬಹಳ ಚೆನ್ನಾಗಿದೆ ಅಂತ". ಅಲ್ಲಿಗೆ ಅಂದಿನ ಕ್ಲಾಸ್ ಮುಗಿದಿತ್ತು.

ನಾನು ಮನೆಗೆ ಬಂದು ಅಪ್ಪನಿಗೆ ವರದಿ ಒಪ್ಪಿಸಿದೆ. ಆಗ ಗೂಗಲ್ ಇರಲಿಲ್ಲವಲ್ಲ, ಹಾಗಾಗಿ ಅಪ್ಪನ ಸಹಾಯ ಕೇಳಲೇ ಬೇಕಾಯಿತು. ಅವರು ಆ ಪದ್ಯವನ್ನು ನೋಡಿದರು. " 'T is well ಅಂದರೆ ಚಹಾ ಬಹಳ ಚೆನ್ನಾಗಿದೆ ಅಂತ ಹೇಳಿದ್ನಾ ಮೂರ್ಖ! ಅಯ್ಯೋ 'T is well ಅಂದರೆ It is well ಅನ್ನೋದರ ಸಂಕ್ಷಿಪ್ತ ರೂಪ ಅಷ್ಟೇ!" ಅಂತ ಅಪ್ಪ ಸರಿಯಾಗಿ ಹೇಳಿಕೊಟ್ಟರು. ಅಷ್ಟೇ ಅಲ್ಲದೇ, "ಡಿಗ್ರೀ ಮಾಡಿಕೊಳ್ಳದೆ ಇರುವ ಹುಡುಗನನ್ನು ಹೈ-ಸ್ಕೂಲ್ ನಲ್ಲಿ ಟೀಚರ್ ಕೆಲಸ ಕೊಡುವುದು ಕಾನೂನು ಪ್ರಕಾರ ತಪ್ಪು, ಅವನಿಗೆ ಕೆಲಸ ಹೇಗೆ ಕೊಟ್ಟರು ಅಂತ ನಿಮ್ಮ ಕ್ಲಾಸ್ ಟೀಚರ್ ಗೆ ಕೇಳು" ಎಂದು ಅಪ್ಪ ನನ್ನ ತಲೆ ತುಂಬಿದರು. ಮಾರನೆಯ ದಿನ ಶಾಲೆಗೆ ಹೋದ ಕೂಡಲೇ ನಾನು ನಮ್ಮ ಕ್ಲಾಸ್ ಟೀಚರ್ ಗೆ ಚಾಚೂ ತಪ್ಪದೆ ಅಪ್ಪ ಹೇಳಿಕೊಟ್ಟಂತೆ ಕೇಳಿಯೇ ಬಿಟ್ಟೆ. ಬೆಪ್ಪುತಕ್ಕಡಿ ಟೀಚರ್ ತಬ್ಬಿಬ್ಬಾದರು. "ಆ ಹುಡುಗ, ತುಂಬಾ ಜಾಣ, ಬೇರೆ ಕಡೆ ಕೆಲಸ ಸಿಗೋವರೆಗೂ ಇಲ್ಲಿ ಪಾಠ ಹೇಳಿಕೊಡುತ್ತಾನಷ್ಟೇ..." ಅಂತ ನಮ್ಮ ಟೀಚರ್ ಕಥೆ ಹೇಳಿದರು.

ಸರಿ, ಮತ್ತೆ ಇಂಗ್ಲಿಷ್ ಪೀರಿಯಡ್ ಬಂದಿತು. ಆದರೆ ನಮ್ಮ ಗುರುಗಳ ಮುಖ ಗುರ್ರ್ ಎನ್ನುವಂತಿತ್ತು. "ನೋಡ್ರಪ್ಪ ನಾ ಕ್ಲಾಸ್ ತೊಗೊಳೋದು ಶಾರದಾಗ ಇಷ್ಟ ಇಲ್ಲಂತ, ಏನ್ ಮಾಡ್ಬೇಕು" ಅಂತ ಬಾಣ ಬಿಟ್ಟು ಮುಂದಿನ ಪಾಠ ಶುರು ಮಾಡಿದರು. ನನಗೋ ಎದೆ ಢವ ಢವ. ಅಷ್ಟು ಬೇಗ ಸುದ್ದಿ ಮುಟ್ಟಿದೆಯಲ್ಲ ಅಂತ. ನನ್ನ ತಲೆ ಹರಟೆಗೆ ಹೆಡ್ ಮಿಸ್ ಬೈಯುತ್ತಾರೇನೋ ಅಂತ ಭಯ. ನಾನು ಕೇಳಿದ್ದರಲ್ಲಿ ತಪ್ಪಿರಲಿಲ್ಲ ಆದರೂ...

ಅಂದಿನ ದಿನವೂ ನಾನು ಅಪ್ಪನಿಗೆ ವರದಿ ಒಪ್ಪಿಸಿದೆ. ಸ್ವಲ್ಪ ದಿನ ಕಾದು ನೋಡೋಣವೆಂದು ಅಪ್ಪ ಹೇಳಿದರು. ಮೂರನೆಯ ದಿನದಿಂದ ಗುರುಗಳು ಗುಪ್ತ ಗಾಮಿನಿಯಂತೆ ಎಲ್ಲೋ ಮರೆಯಾದರು. ಏನಾಯಿತೋ ಹೇಗಾಯಿತೋ ಗೊತ್ತಾಗಲಿಲ್ಲ.

No comments: