Thursday, June 16, 2011

"Skill upgradation" ನ ಪ್ರಾಮುಖ್ಯತೆ ;-)

ಈ Competitive ಪ್ರಪಂಚದಲ್ಲಿ ಕಾಲಕ್ಕೆ ತಕ್ಕಂತೆ, ಪರಿಸರಕ್ಕೆ ತಕ್ಕಂತೆ Skills update ಮಾಡಿಕೊಳ್ಳುತ್ತಲೇ ಇರಬೇಕು. ಇಲ್ಲದಿದ್ದರೆ ನಾವು ನಿಂತ ನೀರಾಗುತ್ತೇವೆ, ಯಾವುದೋ ಪ್ರವಾಹ ಬಂದು ಹೇಳ ಹೆಸರಿಲ್ಲದಂತೆ ಕೊಚ್ಚಿಕೊಂಡು ಹೋಗುತ್ತೇವೆ.

ಗೊತ್ತು, ಗೊತ್ತು, ಇಂಥ ಸಾಕಷ್ಟು 'ಪ್ರಭಾವಶಾಲಿ' ಕೊರೆತಗಳನ್ನು ನಿಮ್ಮ ನಿಮ್ಮ ಮ್ಯಾನೇಜರ್ ಗಳು ನಿಮಗಾಗಲೇ ಕೊಟ್ಟಿರುತ್ತಾರೆ, ಕೊಡುತ್ತಾ ಇರುತ್ತಾರೆ. (ಇಲ್ಲಿ 'ಪ್ರಭಾವಶಾಲಿ' ಎಂದರೆ ಪ್ರಭಾವದ ಅಭಾವ ಇರುವ ಮಾತು ಎಂದರ್ಥ!).

ನಾನಿಲ್ಲಿ ಹೇಳಹೊರಟಿರುವುದು "Skill upgradation" ನ ಅಗತ್ಯದ ಬಗ್ಗೆ ಕಣ್ಣಾರೆ ಕಂಡ ಉದಾಹರಣೆ.

ನಾನು, ಮೊನ್ನೆ ಕಾರಿನಲ್ಲಿ ಹೋಗುವಾಗ ಸೇಂಟ್ ಜಾನ್ ಸಿಗ್ನಲ್ ಬಳಿ ಕೆಲ ನಿಮಿಷ ನಿಲ್ಲಬೇಕಾಯಿತು. ಟ್ರಾಫಿಕ್ ಜಾಸ್ತಿ ಇತ್ತು. ಬಣ್ಣ ಬಣ್ಣದ ಸೀರೆಯುಟ್ಟು,  ಸೀಮೆ ಸುಣ್ಣದಂತೆ ಮುಖಕ್ಕೆ ಪೌಡರ್ ಬಳಿದುಕೊಂಡು  ನಪುಂಸಕರು  ನಿಂತ  ವಾಹನಗಳಿಗೆ  ಲಗ್ಗೆ  ಇಟ್ಟರು.  ನಮ್ಮ ಕಾರಿನ ಬಳಿಯೊಬ್ಬ ಬಂದು ಕಿಟಕಿ ಗ್ಲಾಸ್ ತಟ್ಟಿದ. ನಾವೇನೂ ಪ್ರತಿಕ್ರಿಯಿಸಲಿಲ್ಲ. ಅದಕ್ಕವನು ತನ್ನ ಎರಡೂ ಕೈಗಳ ಬೆರಳುಗಳನ್ನು ಲಟ ಲಟನೆ ಮುರಿದು ಏನೋ ಶಾಪ ಹಾಕಿದ. "ಪರವಾಗಿಲ್ವೆ, ಏನೋ  ಹೊಸ  ಹೊಸ  blackmailing  techniques  ಕಲಿತಿದ್ದಾರೆ" ಅಂತ ನಾನು ಅಂದುಕೊಂಡೆ. ಅವನು ಶಾಪ   ಹಾಕಿದಾಗಲೂ  ನಾವೇನೂ  ಭಿಕ್ಷೆ  ಹಾಕದಿದ್ದಕ್ಕೆ  ಆತ ಕಾರಿನ  ಮುಂಭಾಗಕ್ಕೆ ಬಂದು ನಿಂತ. ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಒಂದು ನಿಂಬೆ ಹಣ್ಣನ್ನು ತೆಗೆದು ಏನೋ ಮಂತ್ರಿಸುವಂತೆ ನಾಟಕವಾಡಿ, ಮತ್ತೆ  ಬೆರಳುಗಳನ್ನು ಲಟ ಲಟನೆ ಮುರಿದು ಏನೋ ಶಾಪ ಹಾಕಿದ. ಭಿಕ್ಷುಕರಲ್ಲೂ ಎಷ್ಟೆಲ್ಲಾ competition ಇದೆಯಲ್ಲ, ಭಿಕ್ಷೆ ಗಿಟ್ಟಿಸಲು ಏನೆಲ್ಲಾ ತಂತ್ರಗಳನ್ನು ಮಾಡುತ್ತಾರಲ್ಲ ಅಂತ ಅನ್ನಿಸಿತು.

ಇನ್ನುಮೇಲಿಂದ ಕಾರಿನಲ್ಲಿ ಒಂದು ನಿಂಬೆ ಹಣ್ಣನ್ನು ಇಟ್ಟುಕೊಂಡು ಹೋಗಬೇಕೆಂದು ಯೋಚಿಸಿದ್ದೇನೆ. ನಿಂಬೆ ಹಣ್ಣನ್ನು ನಿಂಬೆ ಹಣ್ಣಿನಿಂದಲೇ ನಿವಾರಿಸಬೇಕು! ಮೂಢ ನಂಬಿಕೆಗಳಲ್ಲಿ ನಂಬಿಕೆಯಿರುವವರು ಖಂಡಿತ ನಿಂಬೆ ಹಣ್ಣಿನ ತಂತ್ರಕ್ಕೆ ಹೆದರಿ ಭಿಕ್ಷೆ ಹಾಕುತ್ತಾರೆ. ಗ್ಯಾರಂಟಿ!! ನಿಮ್ಮ area ಗಳಲ್ಲೂ ಇಂಥವರು ಎದುರಾಗಬಹುದು, ಭಯಪಡಬೇಡಿ.

ನಿಂಬೆ ಹಣ್ಣನ್ನು  Tool  ತರಹ ಉಪಯೋಗಿಸಿ ಹೊಸ ಹೊಸ  blackmailing  techniques ಪ್ರಯೋಗಿಸುವ ನಪುಂಸಕರನ್ನು ನೋಡಿ,  IT ಕಂಪನಿಗಳ ಪೈಪೋಟಿ ನೆನಪಾಯಿತು,  Resume  ತುಂಬಾ  skill sets  ಪೇರಿಸಿಡಲು  ಪರದಾಡುವ   software engineers  ನೆನಪಾಯಿತು. Hmmm ...ಎಲ್ಲೆಲ್ಲೂ ಸ್ಪರ್ಧೆ.  

Wednesday, June 15, 2011

ಪಂಚಾಂಗದಲ್ಲಿ ಚೌಚೌ-ಫಲ

ಜೂನ್ ೧೫, ೨೦೧೧, ರಾತ್ರಿ ೧೧.೫೫ ಕ್ಕೆ ಚಂದ್ರಗ್ರಹಣ scheduled ಆಗಿತ್ತು. 

ಬೆಳ್ಳಂಬೆಳಗ್ಗೆ, ನಮ್ಮತ್ತೆ ಫೋನ್ ಮಾಡಿದ್ದರು. ರಾಯರ ಮಠದ ಪಂಚಾಂಗದ ಪ್ರಕಾರ, ಈ ಗ್ರಹಣದಿಂದ ಮಕರ ರಾಶಿಯವರಿಗೆ 'ಅಶುಭ-ಫಲ'ವಿದೆಯೆಂದೂ,  ಕೆಲವು ಪದಾರ್ಥಗಳನ್ನು ದಾನ ಕೊಡಬೇಕೆಂದೂ,  ದೇವರಲ್ಲಿ ಪ್ರಾರ್ಥನೆ ಮಾಡಬೇಕೆಂದೂ ನನಗೆ (ಮಕರಿಗೆ) ಹೇಳಿದರು. 

ಸ್ವಲ್ಪ ಸಮಯದ ನಂತರ ಅಮ್ಮ ಖುಷಿ ಖುಷಿಯಾಗಿ ಫೋನ್ ಮಾಡಿದರು.  ಉತ್ತರಾದಿ ಮಠದ ಪಂಚಾಂಗದ ಪ್ರಕಾರ ಈ ಗ್ರಹಣದಿಂದ ಮಕರ ರಾಶಿಯವರಿಗೆ 'ಶುಭ-ಫಲ'  ವಿದೆಯೆಂದೂ ಉದ್ಯೋಗದಲ್ಲಿ ಬದಲಾವಣೆ,  ಪ್ರಗತಿ,  ಇತ್ಯಾದಿಗಳ  ಸಂಭವನೀಯತೆಯಿದೆಯಂದೂ ಹೇಳಿದರು. 

ಪಂಚಾಂಗದ terminologies ಪ್ರಕಾರ, ಗ್ರಹಣದ ಒಳ್ಳೆಯ ಪರಿಣಾಮವನ್ನು "ಶುಭ ಫಲ" ಎಂದೂ, ಕೆಟ್ಟ ಪರಿಣಾಮವನ್ನು "ಅಶುಭ ಫಲ" ಎಂದೂ, ಕೆಟ್ಟ ಮತ್ತು ಒಳ್ಳೆಯ ಪ್ರಭಾವಗಳು ಮಿಶ್ರಿತವಾಗಿದ್ದರೆ ಅದನ್ನು "ಮಿಶ್ರ ಫಲ" ಎಂದೂ ಕರೆಯುತ್ತಾರೆ. 

ಆದರೆ ವಿವಿಧ ರೀತಿಯ ಪಂಚಾಂಗಗಳು ಮಕರಕ್ಕೆ ಮಾಡಿದ ಹಾಗೆ conflict ಉಂಟು ಮಾಡಿದರೆ ಅದನ್ನು "ಚೌ ಚೌ ಫಲ" ಎಂದು ಕರೆಯಬೇಕು ಎಂದು ನಾನು ನಿರ್ಧರಿಸಿದ್ದೇನೆ!

Tuesday, June 14, 2011

ಉತ್ತರ ವದತು

"ಸಂಸ್ಕೃತ ಭಾರತಿ"ಯ Spoken Sanskrit Classes ಗೆ ಹೋಗುತ್ತಿದ್ದ ದಿನಗಳ ಮಾತು. ಒಮ್ಮೆ ಕ್ಲಾಸ್ ನಲ್ಲಿ ನಮ್ಮ ಶಿಕ್ಷಕಿ, ಸಂಸ್ಕೃತ ಶಿಬಿರಗಳಲ್ಲಿ ತಾವು ಎದುರಿಸಿದ ಹಾಸ್ಯ ಸನ್ನಿವೇಶಗಳ ಬಗ್ಗೆ ಹೇಳುತ್ತಾ ಇದ್ದರು. ಅದರಲ್ಲಿ ಒಂದು ಸನ್ನಿವೇಶ ಹೀಗಿತ್ತು.

ನಮ್ಮ ಶಿಕ್ಷಕಿ ಒಮ್ಮೆ ಶಾಲಾ ಮಕ್ಕಳಿಗಾಗಿ ಸಂಸ್ಕೃತ ಶಿಬಿರ ನಡೆಸುತ್ತಾ ಇದ್ದರು. ತರಗತಿಯಲ್ಲಿ ಅವರು ಒಂದು ಪ್ರಶ್ನೆ ಕೇಳಿ, ಪ್ರತಿಯೊಬ್ಬ ವಿದ್ಯಾರ್ಥಿಗೂ  "ಉತ್ತರ ವದತು" ಅಂತ ಹೇಳಿ ಹೇಳಿ ಮಕ್ಕಳಿಂದ ಉತ್ತರ ಕೇಳುತ್ತಿದ್ದರು. "ಉತ್ತರ ವದತು" ಎಂದರೆ ಸಂಸ್ಕೃತದಲ್ಲಿ "ಉತ್ತರ ಹೇಳು" ಎಂದರ್ಥ. ಹೀಗೇ ಎಲ್ಲರೂ ಉತ್ತರ ಹೇಳಿದ ಮೇಲೆ ಅವರು ಮುಂದಿನ ಪಾಠ ಶುರು ಮಾಡಬೇಕು ಎನ್ನುವಷ್ಟರಲ್ಲಿ ಮೂಲೆಯಲ್ಲಿ ಕೊನೆಯ ಸಾಲಿನಲ್ಲಿ ಕುಳಿತಿದ್ದ ಹುಡುಗನೊಬ್ಬ 
"ಅಯ್ಯೋ ಮಿಸ್, ನಾನಿನ್ನೂ ವದ್ದಿಲ್ಲ" ಅಂತ  ಕೈ ಎತ್ತಿದನಂತೆ!

Monday, June 13, 2011

ಮಾತೃ ಭಾಷೆಯ ಪ್ರಭಾವ

MTI or Mother tongue influence ಬಗ್ಗೆ ನಮಗೆಲ್ಲ ತಿಳಿದಿದ್ದೆ ಇದೆ. ನಾನು ನನ್ನ ದಕ್ಷಿಣ ಭಾರತೀಯ ಸಹೋದ್ಯೋಗಿಗಳ ಜೊತೆ ಇಂಗ್ಲಿಷ್ ನಲ್ಲಿ ಮಾತನಾಡುವಾಗ ಆದ ಕೆಲವು ಹಾಸ್ಯಮಯ ಸಂಭಾಷಣೆಗಳನ್ನು ಪಟ್ಟಿ ಮಾಡಿದ್ದೇನೆ. ಇಂಥ ಎಷ್ಟೋ ಸನ್ನಿವೇಶಗಳನ್ನು ನೀವೂ ಎದುರಿಸಿರುತ್ತೀರ!

ನಾನು: Hey I am going...
ಸಹೋದ್ಯೋಗಿ: Going ಹೋಮಾ?

ನಾನು:  Are you attending the training?
ಸಹೋದ್ಯೋಗಿ: Who? me ಯಾ?

ನಾನು: See...this is Ram's BDA site
ಸಹೋದ್ಯೋಗಿ: Oh! It is in the same areaವಾ?

ಸಹೋದ್ಯೋಗಿ: I have done it this way, Okವಾ?

ಸಹೋದ್ಯೋಗಿ: You ಶ್ಯಾರ್ the file ವ್ಯಾರ್ever there is space.

ನಾನು:  I am compiling the files
ಸಹೋದ್ಯೋಗಿ: You are compiling ಆಲಾ?




ತಲೆಹರಟೆ

ಮೂವತ್ತು ವರ್ಷದ ಮಗ ಅಡ್ಡ ದಾರಿ ಹಿಡಿದು ತಂದೆ ತಾಯಿಯ ನೆಮ್ಮದಿಗೆ ಬೆಂಕಿ ಇಟ್ಟಿದ್ದಾನೆ. ನಲ್ಲೀಲಿ ಕಾವೇರಿ ನೀರು ಬರತ್ತೋ ಇಲ್ಲವೋ ಗಿರಿಜಾ ಆಂಟಿ ಕಣ್ಣಲ್ಲಿ ಮಾತ್ರ ದಿನಬೆಳಗಾದರೆ ನೀರು. ಗುರುಬಲ ಇಲ್ಲ, ಶಾಂತಿ ಮಾಡಿಸಿದರೆ ದುಡಿಯಲು ಶುರು ಮಾಡಿ ಮಗ ಸರಿ ದಾರಿಗೆ ಬರುತ್ತಾನೆ ಅಂತ ನೆರೆಹೊರೆಯ ಹಿತೈಷಿಗಳ ಉವಾಚ. Latest ಗೋಳು ಹೇಳಿಕೊಳ್ಳಲು ಆಂಟಿ ನಮ್ಮ ಮನೆಗೆ ಬಂದಿದ್ದರು. ಶಾಂತಿಯ ಬಗ್ಗೆ ಕೂಡಾ ಹೇಳಿದರು. ನಾವು ಸಮಾಧಾನದ ಮಾತನ್ನು ಹೇಳಿ ಅವರನ್ನು ಕಳಿಸಿದೆವು.

ನಾನಿನ್ನೂ "ಅಯ್ಯೋ ಪಾಪ" ದ ಮೂಡ್ ನಲ್ಲೇ ಇರುವಾಗ ನನ್ನ ಪತಿಯ ತಲೆಹರಟೆ ಉವಾಚ: "ಮೂವತ್ತು ವರ್ಷಗಳ ಹಿಂದೆ ವಾಂತಿ ಮಾಡ್ಕೊಂಡ್ ಕರ್ಮಕ್ಕೆ ಈಗ ಶಾಂತಿ ಬೇರೆ ಕೇಳು!".


ಇಂಗ್ಲಿಷ್ ಟೀಚರ್


ನಾನು ಓದಿದ್ದು ಒಂದು ಸಾಧಾರಣವಾದ ಕನ್ನಡ ಮಾಧ್ಯಮ ಶಾಲೆಯಲ್ಲಿ. ಎಂಟನೆಯ ತರಗತಿಯಲ್ಲಿ ಕಾಲಿಟ್ಟೆ. ಒಂದು ತಮಾಷೆ ಕಾದಿತ್ತು. ಆ ವರ್ಷವೇ ನಮ್ಮ ಶಾಲೆಯಿಂದ ಹತ್ತನೆಯ ತರಗತಿಯಲ್ಲಿ ಪಾಸಾಗಿದ್ದ ಹುಡುಗನೊಬ್ಬ ನಮ್ಮ ಪಾಲಿಗೆ ಇಂಗ್ಲಿಷ್ ಟೀಚರ್ ಆಗಿ ಬಂದಿದ್ದ. ಅದು ಹೇಗೆ ಸಾಧ್ಯ ಅಂತ ಮಾತ್ರ ಕೇಳಬೇಡಿ. ಹೀಗೂ ಉಂಟು! ಅದೂ ಜಿಲ್ಲಾ ಪ್ರದೇಶಗಳಲ್ಲಿ! ನಮಗೆ ಏನೂ ಅರ್ಥವೇ ಆಗಲಿಲ್ಲ. ತರಗತಿಯಲ್ಲಿ ಗುಸು ಗುಸು, ಮುಸಿ ಮುಸಿ ನಗು. ಮೊದಲ ದಿನ ಪದ್ಯ ಹೇಳಿಕೊಡಲು ಶುರು ಮಾಡಿದ.

ಅವನ ದುರದೃಷ್ಟ, ನಮ್ಮ ಬ್ಯಾಚ್ ನಿಂದ ಸಿಲೆಬಸ್ ಬದಲಾಗಿತ್ತು, ಅವನು ಓದಿದ ಪಾಠಗಳು ಅವನ ನೆರವಿಗೆ ಬರುವಂತಿರಲಿಲ್ಲ.
ಯಾವುದೋ "ಹಳೆಗನ್ನಡ" ದಂತೆ "ಹಳೆ ಇಂಗ್ಲಿಷ್" ನಲ್ಲಿ ಬರೆದ ಓಬಿರಾಯನ ಕಾಲದ ಪದ್ಯ ಅದು. ತಲೆ ಬುಡ ಅರ್ಥ ಆಗುತ್ತಿಲ್ಲ. ಅವನಿಗೂ ಅರ್ಥವಾಗಿಲ್ಲ. ಪಾಪ, ಅವನಿಗೆ ಮುಜುಗರ ಆಗಬಾರದೆಂದು ನಾವು, ಅರ್ಥ ಆದವರಂತೆ ತಲೆ ಹಾಕುತ್ತ ಇದ್ದೆವು. ಹೀಗೇ ಸಮಯ ಸಾಗುತ್ತಿರುವಾಗ, ಪದ್ಯದಲ್ಲಿ ಏನೋ ಒಂದು ಸಾಲು ಕಂಡಿತು "'T is well ..." ಅಂತ. ಅದಕ್ಕೆ ನಮ್ಮ ಹುಡುಗ, ಕ್ಷಮಿಸಿ ನಮ್ಮ ಗುರುಗಳು ವ್ಯಾಖಾನ ಮಾಡಿದ್ದು ಹೀಗೆ," 'T is well ಅಂದರೆ ಚಹಾ ಬಹಳ ಚೆನ್ನಾಗಿದೆ ಅಂತ". ಅಲ್ಲಿಗೆ ಅಂದಿನ ಕ್ಲಾಸ್ ಮುಗಿದಿತ್ತು.

ನಾನು ಮನೆಗೆ ಬಂದು ಅಪ್ಪನಿಗೆ ವರದಿ ಒಪ್ಪಿಸಿದೆ. ಆಗ ಗೂಗಲ್ ಇರಲಿಲ್ಲವಲ್ಲ, ಹಾಗಾಗಿ ಅಪ್ಪನ ಸಹಾಯ ಕೇಳಲೇ ಬೇಕಾಯಿತು. ಅವರು ಆ ಪದ್ಯವನ್ನು ನೋಡಿದರು. " 'T is well ಅಂದರೆ ಚಹಾ ಬಹಳ ಚೆನ್ನಾಗಿದೆ ಅಂತ ಹೇಳಿದ್ನಾ ಮೂರ್ಖ! ಅಯ್ಯೋ 'T is well ಅಂದರೆ It is well ಅನ್ನೋದರ ಸಂಕ್ಷಿಪ್ತ ರೂಪ ಅಷ್ಟೇ!" ಅಂತ ಅಪ್ಪ ಸರಿಯಾಗಿ ಹೇಳಿಕೊಟ್ಟರು. ಅಷ್ಟೇ ಅಲ್ಲದೇ, "ಡಿಗ್ರೀ ಮಾಡಿಕೊಳ್ಳದೆ ಇರುವ ಹುಡುಗನನ್ನು ಹೈ-ಸ್ಕೂಲ್ ನಲ್ಲಿ ಟೀಚರ್ ಕೆಲಸ ಕೊಡುವುದು ಕಾನೂನು ಪ್ರಕಾರ ತಪ್ಪು, ಅವನಿಗೆ ಕೆಲಸ ಹೇಗೆ ಕೊಟ್ಟರು ಅಂತ ನಿಮ್ಮ ಕ್ಲಾಸ್ ಟೀಚರ್ ಗೆ ಕೇಳು" ಎಂದು ಅಪ್ಪ ನನ್ನ ತಲೆ ತುಂಬಿದರು. ಮಾರನೆಯ ದಿನ ಶಾಲೆಗೆ ಹೋದ ಕೂಡಲೇ ನಾನು ನಮ್ಮ ಕ್ಲಾಸ್ ಟೀಚರ್ ಗೆ ಚಾಚೂ ತಪ್ಪದೆ ಅಪ್ಪ ಹೇಳಿಕೊಟ್ಟಂತೆ ಕೇಳಿಯೇ ಬಿಟ್ಟೆ. ಬೆಪ್ಪುತಕ್ಕಡಿ ಟೀಚರ್ ತಬ್ಬಿಬ್ಬಾದರು. "ಆ ಹುಡುಗ, ತುಂಬಾ ಜಾಣ, ಬೇರೆ ಕಡೆ ಕೆಲಸ ಸಿಗೋವರೆಗೂ ಇಲ್ಲಿ ಪಾಠ ಹೇಳಿಕೊಡುತ್ತಾನಷ್ಟೇ..." ಅಂತ ನಮ್ಮ ಟೀಚರ್ ಕಥೆ ಹೇಳಿದರು.

ಸರಿ, ಮತ್ತೆ ಇಂಗ್ಲಿಷ್ ಪೀರಿಯಡ್ ಬಂದಿತು. ಆದರೆ ನಮ್ಮ ಗುರುಗಳ ಮುಖ ಗುರ್ರ್ ಎನ್ನುವಂತಿತ್ತು. "ನೋಡ್ರಪ್ಪ ನಾ ಕ್ಲಾಸ್ ತೊಗೊಳೋದು ಶಾರದಾಗ ಇಷ್ಟ ಇಲ್ಲಂತ, ಏನ್ ಮಾಡ್ಬೇಕು" ಅಂತ ಬಾಣ ಬಿಟ್ಟು ಮುಂದಿನ ಪಾಠ ಶುರು ಮಾಡಿದರು. ನನಗೋ ಎದೆ ಢವ ಢವ. ಅಷ್ಟು ಬೇಗ ಸುದ್ದಿ ಮುಟ್ಟಿದೆಯಲ್ಲ ಅಂತ. ನನ್ನ ತಲೆ ಹರಟೆಗೆ ಹೆಡ್ ಮಿಸ್ ಬೈಯುತ್ತಾರೇನೋ ಅಂತ ಭಯ. ನಾನು ಕೇಳಿದ್ದರಲ್ಲಿ ತಪ್ಪಿರಲಿಲ್ಲ ಆದರೂ...

ಅಂದಿನ ದಿನವೂ ನಾನು ಅಪ್ಪನಿಗೆ ವರದಿ ಒಪ್ಪಿಸಿದೆ. ಸ್ವಲ್ಪ ದಿನ ಕಾದು ನೋಡೋಣವೆಂದು ಅಪ್ಪ ಹೇಳಿದರು. ಮೂರನೆಯ ದಿನದಿಂದ ಗುರುಗಳು ಗುಪ್ತ ಗಾಮಿನಿಯಂತೆ ಎಲ್ಲೋ ಮರೆಯಾದರು. ಏನಾಯಿತೋ ಹೇಗಾಯಿತೋ ಗೊತ್ತಾಗಲಿಲ್ಲ.

ಬೆನಕ ಬೆನಕ ಏಕದಂತ

ಮೂರು ವರ್ಷದ ನನ್ನ ತಮ್ಮನಿಗೆ, ಅಮ್ಮ "ಬೆನಕ ಬೆನಕ ಏಕ ದಂತ..." ಸ್ತೋತ್ರ ಹೇಳಿಕೊಡುತ್ತಿದ್ದರು. ಅದೇ ದಿನಗಳಲ್ಲಿ ಅವನು ರೇಡಿಯೋದಲ್ಲಿ ಬರುತ್ತಿದ್ದ "ಆಗಸಕೆ ಮೋಡ ಸಂಗಾತಿ, ಆ ಲತೆಗೆ ಹೂವೆ ಸಂಗಾತಿ..." ಹಾಡನ್ನೂ ಕೇಳಿ ಕುಣಿಯುತ್ತಿದ್ದ. ಗಣೇಶನ ಸ್ತೋತ್ರ ಹಾಗೂ ಚಿತ್ರಗೀತೆ, ಈ ಎರಡನ್ನೂ ಸೇರಿಸಿ ಅವನ ಬಾಯಿಗೆ ಬರುತ್ತಿದ್ದದ್ದು "ಆಗಸಕೆ ಮೋಡ ಸಂಗಾತಿ, ಆ ಲತೆಗೆ ಹೂವೆ ಸಂಗಾತಿ...ಓ ನಲ್ಲೇ.....ನಿನಗೇ....ಇಪ್ಪತ್ತೊಂದು ನಮಸ್ಕಾರಗಳು"!!


ನಿಮಗೆ ಗೊತ್ತಿತ್ತಾ?

ನನ್ನ ತಮ್ಮ ಐದು ವರ್ಷದ ಹುಡುಗನಾಗಿದ್ದಾಗಿನ ಮಾತಿದು. ನಮ್ಮ ಪಕ್ಕದ ಮನೆ ಅಂಕಲ್ ತಮ್ಮ ಮನೆ ಸುತ್ತ ಕಾಂಪೌಂಡ್ ಕಟ್ಟಿಸುತ್ತಾ ಇದ್ದರು. ಮನೆಯ ಮುಂದೇನೇ ಆಟ ಆಡುತ್ತಿದ್ದ ನನ್ನ ತಮ್ಮನನ್ನು ಅವರು ಕೇಳಿದರು, "ಮರಿ, ಮನೆಗೆ ಕಾಂಪೌಂಡ್ ಯಾಕೆ  ಕಟ್ಟಿಸ್ತಾರೆ ಹೇಳು?". ಸ್ವಲ್ಪಾನೂ ತಡ ಮಾಡದೆ ನನ್ನ ತಮ್ಮ ಹೇಳಿದ "ಆಕಡೆ ಮನೆಯವ್ರು ಈಕಡೆ ಬರ್ಬಾರ್ದು ಅಂತ".