Monday, March 5, 2012

ಪುಟ್ಟಾ ಪದಕೋಶ

ಪುಟ್ಟಾ ಪದಕೋಶ (ಪುಟ್ಟಾ, ನನ್ನ ಅಣ್ಣನ ಮಗಳು)





ಪೀಯಣ್ಣ:


ರಾತ್ರಿ 'ಪೀ' 'ಪೀ' ಎಂದು ವಿಸಿಲ್ ಹಾಕುತ್ತ ಬರುವ ಬೀಟ್ ಪೋಲಿಸ್ ನನ್ನು ಕರಯುವುದಾಗಿ ಹೆದರಿಸಿ ನನ್ನ ಅತ್ತಿಗೆ ಪುಟ್ಟಾಳನ್ನು ಮಲಗಲು ಒತ್ತಾಯಿಸುತ್ತಿದ್ದರು. ಹೀಗಾಗಿ ಅವನ ಹೆಸರೇ "ಪೀಯಣ್ಣ" ಎಂದಾಯಿತು. ಅವನಷ್ಟೇ ಅಲ್ಲದೆ, ಬರಬರುತ್ತಾ ದಾರಿಯಲ್ಲಿ ಕಾಣುವ ಪೊಲೀಸರು, ಸೆಕ್ಯುರಿಟಿ ಗಾರ್ಡ್ ಗಳು, ಪೀ ಪೀ ಊದುತ್ತ ಭಿಕ್ಷೆಗೆ ಬರುವ ಭಿಕ್ಷುಕ ಎಲ್ಲರೂ "ಪೀಯಣ್ಣ" ಗಳೇ ಆದರು.

ಪೀಯಕ್ಕ:

ಅಣ್ಣ ಇದ್ದ ಮೇಲೆ ಒಬ್ಬ ಅಕ್ಕ ಕೂಡ ಇರಬೇಕು ಎನ್ನುವುದು common sense ಅಲ್ಲವೇ! ಪುಟ್ಟಾಗೋಸ್ಕರ ಪೀಯಕ್ಕನ ಅವತಾರ ಹೇಗಾಯಿತು ಎಂದು ಈಗ ತಿಳಿಯೋಣ. ಒಮ್ಮೆ, ಕಾರಿನಲ್ಲಿ ಹೋಗುವಾಗ, ಕಿಕ್ಕಿರಿದ ಟ್ರಾಫಿಕ್ ನಲ್ಲಿ, ಸಿಗ್ನಲ್ ಬಳಿ ಕೆಳಗೆ ಇಳಿಯಬೇಕೆಂದು ಪುಟ್ಟಾ ಹಠ ಮಾಡತೊಡಗಿದಳು. ಒಳಗಿದ್ದವರಿಗೆಲ್ಲಾ ಕಿರಿಕಿರಿ! ಆಗ ನಪುಂಸಕರು ಚಪ್ಪಾಳೆ ತಟ್ಟುತ್ತ
ಭಿಕ್ಷೆಗೆ ಬಂದರು. ಅವರು ವಿಕಾರವಾಗಿ ಅಲಂಕಾರವನ್ನು ಮಾಡಿಕೊಂಡಿದ್ದರು. ಆಗ ಜಾಣ ಅತ್ತಿಗೆ ಹೀಗೆ ಹೇಳಿ ಪುಟ್ಟಾಳ ಹಠಕ್ಕೆ ಕಡಿವಾಣ ಹಾಕಿದರು "ಪೀಯಣ್ಣ ಥರ ಇವ್ರು ಪೀಯಕ್ಕ, ಜಾಸ್ತಿ ಗಲಾಟೆ ಮಾಡಿದ್ರೆ ಎತ್ಕೊಂಡು ಹೋಗ್ತಾರೆ, ಸುಮ್ನಿರು"! ಆಗಿನಿಂದ ಪೀಯಕ್ಕನನ್ನು ಗುರುತಿಸುವಲ್ಲಿ ಪುಟ್ಟಾ expert ಆದಳು!!


ಭಗ್ ಪೇಂಟಿಂಗ್:

ಬೆಂಗಳೂರಿನ ಹೊರವಲಯಗಳಲ್ಲಿ, ಇಲ್ಲವೇ ಹಳ್ಳಿಗಳ ಕಡೆ ನಾವು ಪ್ರವಾಸಕ್ಕೆ ಹೋಗುವಾಗ ವಿಧ ವಿಧವಾದ ಬಣ್ಣ ಬಳೆದಿರುವ ಮನೆಗಳನ್ನು ನೋಡಿ ಪುಟ್ಟಾ ಉದ್ಗಾರ ತೆಗೆಯುತ್ತಿದ್ದುದು ಹೀಗೆ "ಭಗ್ ಪೇಂಟಿಂಗ್, ಭಗ್ ಪೇಂಟಿಂಗ್ ..." ಎಂದು. ಅವಳ ಕಲ್ಪನೆಯಲ್ಲಿ ಭಗ್ ಬಣ್ಣ ಎಂದರೆ ಫ್ಲೊರಸೆಂಟ್ ಹಳದಿ, ಕೇಸರಿ, ನೀಲಿ, ಹಸಿರು ಇತ್ಯಾದಿ. ಇಂತಹ ಬಣ್ಣಗಳ ಗೋಡೆಯನ್ನು ಹೊಂದಿರುವ ಮನೆ ಕಂಡ ಕೂಡಲೇ ಪುಟ್ಟಾ ಅಸಹ್ಯ ಪಟ್ಟುಕೊಂಡು "ಭಗ್ ಪೇಂಟಿಂಗ್" ಎಂದು ತೋರಿಸುತ್ತಿದ್ದಳು. ಹೌದು, ಈ 'ಭಗ್' ಎನ್ನುವ ಪದ ಬಂತಾದರೂ ಹೇಗೆ? ನಮ್ಮಣ್ಣನ ಅಚ್ಚುಮೆಚ್ಚಿನ ಬೈಗುಳಗಳ ಪಟ್ಟಿಯಲ್ಲಿ "ಬಕ್ವಾಸ್" ಎನ್ನುವುದೂ ಒಂದು. ಕೆಲವು ಸಂದರ್ಭಗಳಲ್ಲಿ, "ಬಕ್ವಾಸ್" ಎನ್ನುವುದು "ಬಕ್ಕ್ವಾಸ್" ಎಂದಾಗಿ, 'ಕ' ಮೇಲೆ ಹಾಕುವ ಒತ್ತಡ ನೋಡಿ ನಾವು ಅಣ್ಣನ ಮೈ ಎಷ್ಟು ಉರಿಯುತ್ತಿದೆ ಎಂಬುದರ ಅಂದಾಜನ್ನು ಹಾಕಬಹುದು. "ಬಕ್ವಾಸ್" ನಲ್ಲಿ "ಬಕ್" ಎನ್ನುವುದಷ್ಟೇ ಉಳಿದುಕೊಂಡು, 'ಬ' ಎನ್ನುವುದು 'ಭ' ಆಗಿ, 'ಕ' ಕಾರದಲ್ಲಿ ಗ' ಕಾರ ಆದೇಶವಾಗಿ, ಈ "ಭಗ್" ಎನ್ನುವ ಪದ ಉದ್ಭವವಾಯಿತು!

ಬಕ್ ಪ್ರಭಾವ 

ಭಗ್ ಎನ್ನುವ ಪದ ಹೇಗೆ ಉದ್ಭವವಾಯಿತು ಎನ್ನುವುದಕ್ಕೆ actually ಹಲವಾರು theory ಗಳಿವೆ. ಮೇಲೆ ಉಲ್ಲೇಖ ಮಾಡಿರುವುದು ಒಂದಾದರೆ ಇನ್ನೊಂದನ್ನು ಈಗ ಹೇಳುತ್ತೇನೆ. ಪುಟ್ಟಾ, ತನ್ನ ತಾಯಿಯ ತವರಿಗೆ ಹೋದಾಗ, ಅಡಿಗೆ ಮಾಡಲು ಬರುವ ಹೆಂಗಸಿನ ಜೊತೆ ಗೆಳೆತನ ಮಾಡಿಕೊಂಡಿದ್ದಳು. ಅವಳಿಂದ ಕನ್ನಡದ ಒಂದು ಸಾಲನ್ನು ಕಲಿತಿದ್ದಳು "ಬಕ್ ಬಾಯಿ, ಬೆಕ್ಕಿನ್ ತಾಯಿ, ಏನ್ ಹಡದ್ರೂ ಕರಿ ಕುಂಬಳಕಾಯಿ" ಅಂತ. ಇದರಿಂದಾಗಿ 'ಬಕ್' ಎನ್ನುವುದು ಬೈಗುಳವಾಗಿ ಬಳಕೆಯಾಗತೊಡಗಿತು. 'ಬಕ್ ಪೇಂಟಿಂಗ್' ಎನ್ನುವುದೇ 'ಭಗ್ ಪೇಂಟಿಂಗ್' ಎಂದು ಆಗಿದ್ದರೂ ಆಗಿರಬಹುದು. ಅದಿರಲಿ, ಈ 'ಬಕ್' ಎನ್ನುವ ಪದ ಎಲ್ಲೆಡೆ ಪ್ರಚಲಿತವಾಯಿತು. ಕೆಟ್ಟದಾದ, ಅಸಹ್ಯವಾದ ಯಾವುದೇ ವಸ್ತುವನ್ನೂ, ಇಷ್ಟವಾಗದ ವ್ಯಕ್ತಿಯನ್ನೂ ವರ್ಣಿಸಲು 'ಬಕ್' ಪದಪ್ರಯೋಗವಾಗುತ್ತಿತ್ತು. ಕೆಲವು ಉದಾಹರಣೆಗಳು ಹೀಗಿವೆ:

೧) ಇವತ್ತು ನೋಡಿದ ಸಿನಿಮಾ ಬಹಳ ಬಕ್ ಇತ್ತು
೨) ಆ ಬಕ್ಕಿ ಇವತ್ತು ಕಂಡಿಲ್ಲ ( irritate ಮಾಡುವ ಹುಡುಗಿ ಬಕ್ಕಿ)  
೩) ಬಕ್ ನನ್ ಮಗ ಸಡನ್ನಾಗಿ ಬ್ರೇಕ್ ಹಾಕ್ದ
೪) ಶಕೀಲ ಬಕೀಲ (ಗೋಳು ಹೊಯ್ದುಕೊಳ್ಳುವ ಕೆಲಸದ ಹುಡುಗಿ ಶಕೀಲ ಆದಳು ಬಕೀಲ!)

ಹೀಗೆ ...ಮುಂದುವರೆಯಿತು


ಹೊಸ ಹಾಡು: 

"ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ...
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ...
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ.."

ಎಂದು ವಿಷ್ಣುವರ್ಧನ್ ಅವರು "ಜಿಮ್ಮಿಗಲ್ಲು" ಚಿತ್ರದಲ್ಲಿ ಹಾಡಿದ್ದು ನಮೆಗೆಲ್ಲ ತಿಳಿದೇ ಇದೆ. ತುಂಬಾ ಪ್ರಸಿದ್ಧವಾದ ಹಾಡು. ಇದೇ ಹಾಡನ್ನು 2, 3 ವರ್ಷದ ಪುಟ್ಟಾ ಹಾಡಿದ್ದರೆ ಹೇಗಿರುತ್ತಿತ್ತು ಎಂದರೆ,

"ತುತ್ತು ಒಟ್ಟಿ ತಿನ್ನೋಕೆ, ಬೊಗಸೆ ನೀಉ ಕುಡಿಯೋಕೆ...
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ...
ಅಂಗೈ ಅಗಲ ಊಮು ಸಾಕು ಹಾಯಾಗಿರೋಕೆ..."

2 , 3 ವರ್ಷದ ಪುಟ್ಟಾಗೆ 'ರ' ಕಾರವನ್ನು ಉಚ್ಛಾರ ಮಾಡಲು ಬರುತ್ತಿರಲಿಲ್ಲ. ಹೀಗಾಗಿ ರೊಟ್ಟಿಯನ್ನು ಒಟ್ಟಿ ಎಂದೂ, ರೂಮನ್ನು ಊಮೆಂದೂ ಉಚ್ಛಾರ ಮಾಡುತ್ತಿದ್ದಳು. ನಮ್ಮಿಬ್ಬರ ನಡುವೆ ಹೀಗೊಂದು ಸಂಭಾಷಣೆ ನಡೆದಿತ್ತು.

ನಾನು: ಪುಟ್ಟಾ ಏನ್ ತಿಂತಾ ಇದ್ದೀಯ?
ಪುಟ್ಟಾ: ಒಟ್ಟಿ
ನಾನು: ಆ ಏನು?
ಪುಟ್ಟಾ: ಒಟ್ಟಿ ತಿಂತಾ ಇದ್ದೀನಿ ಒಟ್ಟಿ!!
ನಾನು: ಅಮ್ಮ ಎಲ್ಲಿ?
ಪುಟ್ಟಾ: ಊಂ

ಎರಡನೇ  ಬಾರಿ ನಾನು "ಆ?" ಎಂದು ಕೇಳಲಿಲ್ಲ. ಅವರ ಅಮ್ಮ ರೂಮಲ್ಲಿ ಇದ್ದಾಳೆಂದು ತಿಳಿಯಿತು!



ಮರೆತ ಪದಗಳು

4 ವರ್ಷದ ಪುಟ್ಟಾಳ ಜೊತೆಗೆ ಒಮ್ಮೆ ಕೋರಮಂಗಲದ 80ft ರೋಡ್ ಬಳಿ ಹೋಗುವಾಗ, ಈ ಮಾತುಕತೆ ನಡೆದಿತ್ತು.

ಪುಟ್ಟಾ: ಅತ್ತೆ, ಇಲ್ಲಿ ಒಂದೇನೋ "ಪುಟ್ ಪುಟಾಲಿ" ಅಂತ ಅಂಗಡಿ ಇದೆ. ಪಪ್ಪಾ ಜೊತೆ ಬಂದಾಗ ನೋಡಿದ್ದೆ.
ನಾನು: ಏನು? "ಪುಟ್ ಪುಟಾಲಿ" ಅಂತಾನಾ?
ಪುಟ್ಟಾ: ಹೌದತ್ತೆ (ತಲೆ ಕೆರೆಯುತ್ತ),  ಅದೇನೋ ಹೆಸರಿತ್ತು.


ಅವಳು ಯಾವ ಅಂಗಡಿಯ ಬಗ್ಗೆ ಹೇಳುತ್ತಿದ್ದಾಳೆ ಅಂತ ಅಷ್ಟರಲ್ಲಿ ನನಗೆ ಹೊಳೆದಿತ್ತು! ಅದು "ಲಿಲಿಪುಟ್"! ಆ ಹೆಸರನ್ನು ಅವಳಿಗೆ ಹೇಳಿದಾಗ ಅವಳು ತುಂಬಾ ಹುಮ್ಮಸ್ಸಿನಿಂದ "ಹಾಂ, ಅದೇ...ಅದೇ ಅಂಗಡೀನೆ!!" ಅಂತ ಉದ್ಗಾರ ತೆಗೆದಳು. "ಲಿಲಿ ಪುಟ್" ಅನ್ನುವ ಬದಲು "ಪುಟ್ ಪುಟಾಲಿ" ಅಂದಿದ್ದರ ಬಗ್ಗೆ ಹೇಳಿ ಹೇಳಿ ನಾವಿಬ್ಬರೂ ನಕ್ಕಿದ್ದೇ ನಕ್ಕಿದ್ದು.

ತಿರುಗು ಮುರುಗು

ಹೀಗೇ ಒಮ್ಮೆ ಧಾರವಾಡದ ವಿಶಾಲವಾದ ರಸ್ತೆಯ ಬದಿಯೊಮ್ಮೆ ನಾನು-ಪುಟ್ಟಾ ವಾಕ್ ಮತ್ತು ಟಾಕ್ ಮಾಡುತ್ತಾ ಇದ್ದೆವು. ರಸ್ತೆಯ ಎರಡೂ ಬದಿಯಲ್ಲಿ ತರತರಾವರಿ ಹಣ್ಣಿನ ಮರಗಳಿದ್ದವು. ಹಣ್ಣುಗಳಿಂದ ಕಿಕ್ಕಿರಿದಿದ್ದ ಚಿಕ್ಕ ಮರವೊಂದನ್ನು ತೋರಿಸಿ ನಾನು ಕೇಳಿದೆ, "ಪುಟ್ಟಾ ಇದ್ಯಾವ್ ಹಣ್ಣು ಹೇಳು?". ಅವಳು "ಕುಚೀ" ಅಂದಳು. ನನಗೋ ನಗು ತಡೆಯಲಾಗಲಿಲ್ಲ. ನಾನು ವಿವರಿಸಿದೆ "ಪುಟ್ಟ ಅದನ್ನ ಸಪೋಟ ಅಥವಾ ಚಿಕ್ಕೂ ಅಂತಾರೆ". ಅದಕ್ಕೆ ಪುಟ್ಟಾ "ಹಾಂ, ಹಾಂ...ನಂಗೊತ್ತು, ಚಿಕ್ಕೂ ನೆ ಕನ್ಫ್ಯೂಸ್ ಆಗಿ ಕುಚೀ ಅಂದ್ಬಿಟ್ಟೆ ಅಷ್ಟೇ" ಅಂತ ಸಮರ್ಥನೆ ನೀಡಿದಳು!

ಪುಟ್ಟ ಪದ, ದೊಡ್ಡ ಪದ

ನಾನು: ಪುಟ್ಟಾ, ಯಾಕೆ ಪಪ್ಪಾ ತಂದ ಹೊಸ ಡ್ರೆಸ್ ಹಾಕ್ಕೊಂಡೆ ಇಲ್ವಲ್ಲ?
ಪುಟ್ಟಾ: ನಾನು ಹಬ್ಬಕ್ಕೆ ಹಾಕ್ಕೋತೀನಿ
ನಾನು: ಯಾವ್ ಹಬ್ಬ?
ಪುಟ್ಟಾ: (ನಿಧಾನಿಸಿ...ಯೋಚಿಸಿ) ರ-ಸ-ಸ-ತ-ಪ-ಮಿ ಗೆ ಹಾಕ್ಕೋ ಅಂತ ಅಜ್ಜಿ ಹೇಳಿದಾಳೆ

"ರಥಸಪ್ತಮಿ" ಎನ್ನುವ ಪುಟಾಣಿ ಪದ ಪುಟ್ಟಾಳ ಪುಟ್ಟ ಬಾಯಲ್ಲಿ "ರ-ಸ-ಸ-ತ-ಪ-ಮಿ" ಎಂದಾಗಿತ್ತು!

-ಸಶೇಷ








No comments: